ರಾಜಕೀಯ ಪುಡಾರಿ ಅಲಲ!
ಕೇಳೋ, ಮಗನೆ ಪೌರುಷದ ಸುದ್ದಿ
ಎಷ್ಟು ಮಂದಿಗೆ ಉಂಟು ಈ ತರದ ಬುದ್ದಿ?
ಹತ್ತು ವರುಷದ ಹಿಂದೆ ಇತ್ತು ಲಂಗೋಟಿ
ಈ ಹೊತ್ತು ನೋಡಿದರೆ ಬರಿ ಹತ್ತು ಕೋಟಿ
*********************************
ಈ ಚುನಾವಣೆಯಲ್ಲಿ...
ಈ ಚುನಾವಣೆಯಲ್ಲಿ ಆನೆಗಳು ಬಿದ್ದು
ವ್ರತ್ತಪತ್ರಿಕೆಯಲ್ಲಿ ವಿಪರೀತ ಸದ್ದು
ಕೆಲವು ಕಡೆ ಕತ್ತೆಗಳಿಗೂ ಬಂತು ಗೆಲವು
ಮತ್ತೆ ನರಿಗಳ ಜೊತೆಗೆ ಕರಡಿಗಳು ಹಲವು
**********************************
ಈ ಚುನಾವಣೆ...
ಈ ಚುನಾವಣೆಯೊಂದು ಭಾರಿ ವ್ಯಾಪಾರ
ಮಾರಲಿಕೆ ತೆಗೆದಿಟ್ಟ ಸರಕು ಸರಕಾರ
ಯಾರು ಬೇಕಾದರು ಕೊಳ್ಳಬಹುದಂತೆ
ಐದು ವರುಷಕ್ಕೋಮ್ಮೆ ನೆರೆಯುತ್ತಿದೆ ಸಂತೆ
************************************
ಚುನಾವಣೆಯಲ್ಲಿ ಕೇಳಿದ್ದು...
ಯಾರಪ್ಪ ಬಂದರೂ ನನಗೇನು ಬಂತು?
ಉಪವಾಸ ಸಾಯುತ್ತಿದೆ ಈ ಜೀವ ಜಂತು
ಯಾರಜ್ಜ ಬಂದರೂ ಈ ಪ್ರಜಾರಾಜ್ಯ
ನಿಲ್ಲಿಸಲಾರದು ಅಂದೆ ಹೊಟ್ಟೆಗಳ ವ್ಯಾಜ್ಯ
*********************************
ಪಕ್ಷಗಳು...
ಈ ಪಕ್ಷ ಆ ಪಕ್ಷ, ಅಲ್ಲ ಒಂದೆರಡು ಕೊನೆಗೆ
ನೋಡಿದರೆ,ಸಖಿ, ಎಲ್ಲವೂ ಬರಡು ಬಡವರಿಗೆ
ತಪ್ಪಿಲ್ಲ ಉಪವಾಸ ತಾನೆ
ಇದಕ್ಕೆನ್ನುವರು ರಾಜಕಾರಣದ ಬೇನೆ
********************************
ಪಕ್ಷಾಂತರ ...
ಈ ಪಕ್ಷದಿಂದ ಆ ಪಕ್ಷಕ್ಕೆ ಹಾರಿ
ಸಚಿವ ಸಂಪುಟ ಕೆಡವಿ ಹೊಡೆದರು ನಗಾರಿ
ಹಾರಿದವನಿಗೆ ಕಟ್ಟಿದರು ಮಂತ್ರಿ ಪದವಿ
ರಾಜಕಾರಣವಾಯ್ತು ಸೂಳೆಯರ ಮದುವಿ
************************************
ಆಳುವ ಪಕ್ಷ...
ಅದೃಷ್ಟಶಾಲಿ ಈ ಪಕ್ಷದ ಪುಢಾರಿ
ಕೆಸರು ಹತ್ತುವುದಿಲ್ಲ ಬಿದ್ದರೂ ಜಾರಿ
ಈತನಿಗೆ ಉಂಟು ಇನ್ನೊಂದು ಅನುಕೂಲ
ಸೋತುಹೋದರೆ ಆಗುವನು ರಾಜ್ಯಪಾಲ
**********************************
ಮಂತ್ರಿಗಳ ಡಮರು...
ಅನ್ನಾನ್ನಗತಿಕರಾದರು ಕೋಟಿ ಜನರು
ಆದರೂ ಮುಗಿದಿಲ್ಲ ಮಂತ್ರಿಗಳ ಡಮರು
ನಿತ್ಯವೂ ಕೇಳುತಿದೆ ಈ ಮಹಾವಾದ್ಯ
ಬಹಳ ಜೋರಾಗಿ ಬಿಟ್ಟಿದೆ ಈಗ್ಗೆ ಸದ್ಯ
*******************************
ಇವರ ಕಿಸೆಯೊಳಗೆ
ಇವರ ಕಿಸೆಯೊಳಗಿತ್ತು ಕೇಂದ್ರ ಸರಕಾರ
ಜೇಬುಗಳ ಬಿಸಿ ಮಾಡಿ ಹಾಕಿದರು ಹಾರ
ಇದರ ಫಲವಾಗಿ ಗಳಿಸಿದರು ದಶಕೋಟಿ
ಹೀಗೆ ಹಾಕಿದರು ಜನಕೋಟಿಗಳ ಲೂಟಿ
************************************
ಸರಕಾರಿ ಪಕ್ಷ ...
ಎರಡು ಕೈಯಿಂದಲ್ಲೂ ನುಂಗಲಿಕೆ ಭಕ್ಷ್ಯ
ಶೇಕಡಾ ತೊಂಬತ್ತರಿಗೆ ಇಲ್ಲ ಸೀಟು
ವ್ಯರ್ಥವಾಯಿತ್ತು ಇವರು ಹಚ್ಚಿದ ಗಿಲೀಟು
ಸಚಿವರ ಸ್ಟಷ್ಟೀಕರಣ...
************************************
ಅಪರಾಧಿ ನಾನಲ್ಲ, ನನ್ನ ಕಿಸೆ ಚೊಕ್ಕ
ಎಂದಿಗೂ ನಾನು ತಿಂದವನಲ್ಲ ರೊಕ್ಕ
ಗೊತ್ತಾಗುವುದು ನೋಡಿದರೆ ನನ್ನ ಜೇಬು *
ಇದುವರೆಗೆ ನಾನು ತಿಂದದ್ದು ಬರಿ ಸೇಬು
***********************************
ನೂತನ ಪ್ರಧಾನಿಗೆ...
ಹೊಸದಿಲ್ಲಿಯಲ್ಲಿ ಕುಳಿತ ನೂತನ ಪ್ರಧಾನಿ
ನಿನ್ನಿಂದ ಭಾರತಕ್ಕೆ ಬಾರದಿರಲಿ ಹಾನಿ
ಉತ್ಕರ್ಷ ಬರದಿದ್ದರೂ ಬೇಡ ಕೇಡು
ಮಾಡದಿರು ಮಾರಾಯ, ಇಷ್ಟಾದರೂ ನೀನು ಮಾಡು
******************************************************
No comments:
Post a Comment